ಎಬ್ನರ್ - ಎಷನ್ ಬಾಕ್, ಮೇರಿ ವಾನ್
	1830-1916. ಆಸ್ಟ್ರಿಯದ ಮೊರೇವಿಯ ಪ್ರಾಂತ್ಯದ ಪ್ರಸಿದ್ಧ ಲೇಖಕಿ. ಕಾಂಟ್ ಡುಬಸ್ಕಿಯ ಮಗಳಾದ ಈಕೆಯ ಕಾದಂಬರಿಗಳು ಮತ್ತು ಕಾವ್ಯಗಳು ಹಳ್ಳಿಗಾಡಿನ ನೈಜಚಿತ್ರಗಳಿಗಾಗಿ ಜರ್ಮನ್ ಸಾಹಿತ್ಯದಲ್ಲಿ ವಿಶಿಷ್ಟ ಸ್ಥಾನ ಪಡೆದಿದೆ. ಪ್ರಾರಂಭದಲ್ಲಿ ಈಕೆ ದೊಡ್ಡ ದೊಡ್ಡ ರಂಗನಾಟಕಗಳನ್ನು ಬರೆದಳು. ಅವು ವಿಲೀನಗೊಂಡವು. 1875 ರಲ್ಲಿ ಈಕೆಯ ಸತ್ತ್ವ ಕಥೆಯೊಂದರಲ್ಲಿ ಕಾಣಿಸಿಕೊಂಡಿತು. 1876ರಲ್ಲಿ ಬೋಸೇನ ಎಂಬ ಕಾದಂಬರಿ ಮೊರೇವಿಯದ ಪ್ರಕೃತಿಯ ಹಿನ್ನಲೆಯನ್ನು ಜೀವಂತವಾಗಿ ಸೃಜಿಸಿತು. ಹಳ್ಳಿ ಮತ್ತು ಅರಮನೆಯ ಕಥೆಗಳು ಎಂಬ ಪುಸ್ತಕ 1883 ಮತ್ತು 1886ರಲ್ಲಿ ಎರಡು ಸಂಪುಟದಲ್ಲಿ ಪ್ರಕಟವಾಗಿ ಇವಳ ಸ್ಥಾನವನ್ನು ಭದ್ರಪಡಿಸಿದವು. ಈಕೆಯ ಕಾಂಬ್ರಾಂಬುಲಿ (1884) ಪ್ರಾಣಿಗಳ ಜೀವನದ ಬಗ್ಗೆ ಜರ್ಮನ್ ಭಾಷೆಯಲ್ಲಿ ಬಂದ ಅತ್ಯುತ್ತಮ ಮತ್ತು ಪ್ರಥಮ ಕಥಾಸಂಕಲನ. ಹತ್ತೊಂಬತ್ತನೆಯ ಶತಮಾನದ ಮೊದಲರ್ಧದ ಅರಮನೆಗಳು, ಪಾದ್ರಿಗಳ ಸಾಮಾನ್ಯ ಗೃಹಗಳು, ಹಳ್ಳಿಗಳ ಪಾನಮಂದಿರಗಳು, ಕೂಲಿಕುಂಬಳಿಯವರ ಬಡ ಗುಡಿಸಲುಗಳು-ಇವೆಲ್ಲ ಒಂದೇ ಬಗೆಯ ವಾಸ್ತವಿಕತೆಯಿಂದ ಚಿತ್ರಿತವಾಗಿಸಿ ಆಸ್ಟ್ರಿಯನ್ನರ ಉನ್ನತ ಮನೆತನಗಳ ಬಗ್ಗೆ ವಿಡಂಬನಾತ್ಮಕ ಚಾತುರ್ಯದಿಂದ ರಚಿಸಿದ ಕಾದಂಬರಿಗಳಲ್ಲಿ ಈಕೆಯ ಹಾಸ್ಯಪ್ರವೃತ್ತಿ ಕಾಣಿಸಿಕೊಂಡಂತೆ, ಬಡವರು, ದಬ್ಬಾಳಿಕೆಗೆ ಗುರಿಯಾದವರು ಮತ್ತು ಸಮಾಜಬಾಹಿರರುಗಳ ಬಗ್ಗೆ ಆಳವಾದ ಅರಿವು. ಅನುಕಂಪ ಎದ್ದು ಕಾಣುತ್ತವೆ. ನಗೆ ಸೂಸುವ ಅಲೆಮಾರಿಗಳ ಜೀವನ ಚಿತ್ರಿಸುವ ಉನ್ವರ್ ಬೆಸ್ಟರ್‍ಲಿಕ್ (ನಿರಾಶಾದಾಯಕ ಪ್ರಸಂಗ) 1910ರಲ್ಲಿ ಪ್ರಕಟವಾಯಿತು. ಮಾನವತೆಯೇ ಮೈವೆತ್ತಂತಿದೆ ಈ ಕೃತಿಯಲ್ಲಿ. ಹಳ್ಳಿಗಳಲ್ಲಿ ಪ್ರಚಲಿತವಾದ ಜಾನಪದ ಕಥೆಗಳಿಗೆ ಸಾಹಿತ್ಯಿಕ ರೂಪ ಕೊಟ್ಟ ಕೀರ್ತಿ ಈಕೆಯದು. ಅಫಾರಿಸ್ಮೆನ್ (1880) ಹಲವಾರು ಚಾಟೂಕ್ತಿಗಳ ಸಂಗ್ರಹ. ಚ್ವೇಕಾಂಟೆಸ್ಸೆನ್ ಬಹು ಜನಪ್ರಿಯ ಕೃತಿ.				
(ಎಸ್.ಎ.ಎನ್.)
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ